ಇತ್ತೀಚೆಗಷ್ಟೆ ಊರ ಜಾತ್ರೆಗೆ ಹೋದಾಗ ಏಕೈಕ ಪುತ್ರ ಹೋಗಿ ಜಾತ್ರೆಯ ಲೆಕ್ಕಕ್ಕೆ ಮಂಡೆ ಬೋಳಿಸಿಕೊಂಡು ಬಂದು ತಾಯಿಯ ಎದುರು ಹಾದುಹೋದ ಒಳಗಿನ ಪಡಸಾಲೆಗೆ. ಹೊರಗಿನ ಹಜಾರದಲ್ಲಿ ಹಬ್ಬದ ಸಂಭ್ರಮವಿತ್ತು ಅಲ್ಲಿಯತನಕ. ಅಜ್ಜಿಯು ಸೊಸೆ, ಮೊಮ್ಮಕ್ಕಳೊಂದಿಗೆ ಹರಟೆ ಹೊಡೆಯುತ್ತಿದ್ದಳು.
ಮಗ ಒಳಹೋಗುವಾಗ ಆತನ ಎಡಬದಿಯ ಬೋಳುಮಂಡೆಯ ಕಡೆಗೊಮ್ಮೆ ದೃಷ್ಟಿ ಹಾದುಹೋದದ್ದೇ ತಡ, ಬೋರೆಂದು ಅಳತೊಡಗಿದಳು. ಸುತ್ತಮುತ್ತ ಕುಳಿತ ಸೊಸೆ, ಮಕ್ಕಳು ಕಂಗಾಲು. ಏನು ಎಂದು ಪರಿಪರಿಯಿಂದ ಸೊಸೆ ಮೊಮ್ಮಕ್ಕಳು ಕೇಳಲು ಮಗನ ಕಡೆ ಕೈ ತೋರಿಸುತ್ತಾಳೆಯೇ ವಿನಃ ಆಕೆಯ ಬಾಯಿಯಿಂದ ಪದಗಳು ಹೊರಡುವುದಿಲ್ಲ.
ಹೇಳಜ್ಜಿ, ಹೇಳಜ್ಜಿ ಏನಾಯಿತೆಂದು ಕೇಳಿದರೂ, ಅಜ್ಜಿ ಬಾಯಿ ಬಿಡುವುದಿಲ್ಲ, ಚಿಕ್ಕ ಮಕ್ಕಳಂತೆ ಮಗನ ಕಡೆ ಕೈ ತೋರಿಸುತ್ತಾಳಷ್ಟೇ. ಈಗ ಅಪ್ಪನ ಕೈಯಿಂದ ಈ ಅಜ್ಜಿ ಪೆಟ್ಟು ಹೊಡೆಸುತ್ತಾಳೆನ್ದು ಒಂದೊಂದೇ ಮೊಮ್ಮಕ್ಕಳು ಕಾಲು ಕೀಳತೊಡಗಿದವು.
ಕೊನೆಯ ಪ್ರಯತ್ನವೆಂಬಂತೆ ಸೊಸೆ ಅತ್ತೆಯ ಪಕ್ಕಕ್ಕೆ ಬಂದು "ಅತ್ತೆ , ಏನು ಜಾತ್ರೆಯ ದಿನ ನಿಮ್ಮ ಮಗನ ಕೈಯಲ್ಲಿ ನನಗೆ ಪೆಟ್ಟು ಹೊಡೆಸುವ ಅಂದಾಜ ನಿನ್ನದು, ಏನಾಯ್ತು ಹೇಳು, ಇಲ್ಲದಿದ್ದರೆ ನಾನು ನಿನಗೆ ಏನೋ ಹೇಳಿದೆ ಎಂದು ನನಗೆ ಬಡಿಯುತ್ತಾರತ್ತೆ, ಹೇಳತ್ತೆ" ಅಂದಾಗ, ಅಷ್ಟರಲ್ಲಿ ಮಗ ಹೊರಬರುತ್ತಾನೆ, ಪುನಃ ಬಿಕ್ಕತೊಡಗುತ್ತಾಳೆ.
"ನೋಡೇ, ಆ .... ಆ... ಆ.. ಕಲೆ ಇನ್ನೂ ಹೋಗಿಲ್ಲವಲ್ಲೇ.... " ಎಂದು ಪುನಃ ಬಿಕ್ಕತೊಡಗಿದಳು.
ಹಲವು ದಶಕಗಳ ಹಿಂದೆ ಅಮ್ಮ ಕೂಲಿ ಕೆಲಸ ಮಾಡಿ ಬಂದು ಬೆಲ್ಲದ ಡಬ್ಬ ನೋಡಲು, ಮಗ ಬೆಲ್ಲ ತಿಂದು ಖಾಲಿ ಡಬ್ಬ ಇಟ್ಟಿರುತ್ತಾನೆ. ತಾಯಿ ಸಿಟ್ಟುಗೊಂಡು ಅದೇ ಡಬ್ಬದಿಂದ ಮಗನ ತಲೆಗೆ ಹೊಡೆದು ರಕ್ತ ಆತನ ಮುಂಗೈಯಲ್ಲಿ ಹರಿಯುವಾಗಲೇ ತಿಳಿಯುತ್ತದೆ, ಅವಳು ಹೊಡೆದ ರಭಸ. ಆ ಕಲೆ ಕ್ರಮೇಣ ಕೂದಲಿಂದ ಮರೆಯಾಗಿದ್ದು, ಬೋಳು ಮಂಡೆ ಮಾಡಿದಾಗ, ಆ ಕಲೆ ಕಂಡು ತಾಯಿಯ ಹೃದಯ ಬಿರಿಯುತ್ತದೆ.
ವಾತಾವರಣ ತಿಳಿಯಾದುದನು ಸಂದಿ ಗೊಂದಿಗಳಲಿ ಇಣುಕುತ್ತಿದ್ದ ಪುಟ್ಟ ಮಕ್ಕಳು "ಓ..... ತಟ್ಟೆ ಹಾಕಮ್ಮಾ ....." ಎನ್ನುತ್ತಾ ಅಜ್ಜಿಯ ಕೊರಳಿಗೆ ಜೋತುಬಿದ್ದವು.
ಸೊಸೆ ಬೆವರು ಒರಸಿಕೊಂಡಳು.
*****
2 ಕಾಮೆಂಟ್‌ಗಳು:
adu thaayi karulu madam, hagella mareyolla. makkaligagi thaayi yavattukoraguttale!! chandada baraha.
illiruva chitra galu nive baredidda? chanda ide :)
ಅಜ್ಜಿ ಅತ್ತಿದ್ದು ನೋಡಿ ಏನೋ ಅಂದುಕೊಂಡೆ. ಆದರೆ ಹಳೆಯ ಕಲೆಯ ನೆನಪು ಹೇಳಿದಾಗ ನನಗಂತೂ ನಗು ಬಂತು...ಬರಹ ನವಿರು ಹಾಸ್ಯದಿಂದಿದೆ...ಧನ್ಯವಾದಗಳು
ಚಿತ್ರಗಳೂ ಕೂಡ ಸೊಗಸಾಗಿವೆ...
ಕಾಮೆಂಟ್ ಪೋಸ್ಟ್ ಮಾಡಿ